ಇಲಿರಿಯ-
 	ಮೆಡಿಟರೇನಿಯನ್ನಿನ ಒಂದು ಕವಲಾದ ಏಡ್ರಿಯಾಟಿಕ್ ಸಮುದ್ರ ಪೂರ್ವದ ದಕ್ಷಿಣ ಕರಾವಳಿಯ ಹಾಗೂ ಅದರ ಹಿನ್ನಾಡಿನ ಪ್ರದೇಶಕ್ಕೆ ಪುರಾತನ ಗ್ರೀಕರು ಇಟ್ಟಿದ್ದ ಹೆಸರು. ಇದನ್ನವರು ಇಲಿರಿಸ್ ಎಂದೂ ಕರೆಯುತ್ತಿದ್ದರು. ಮುಂದೆ ರೋಮನ್ನರ ಕಾಲದಲ್ಲಿ ಇದರ ಉತ್ತರಕ್ಕಿರುವ ಸಾವ, ಡಾನ್ಯೂಬ್ ಮತ್ತು ಮೊರಾವ್ ನದಿಗಳವರೆಗಿನ ಭಾಗವೂ ಸೇರಿದ ಇಡೀ ಪ್ರದೇಶಕ್ಕೆ ಇಲಿರಿಕಂ ಎಂದು ಹೆಸರಾಯಿತು. ಕಬ್ಬಿಣಯುಗದಲ್ಲಿ ಇಲ್ಲಿ ಮುಖ್ಯವಾಗಿ ಡಾನ್ಯೂಬಿಯನ್ ಮೂಲದಿಂದ ಬಂದ ಜನ ವಾಸವಾಗಿದ್ದರು. ಪ್ರಾಚೀನ ಯುಗದ ಪೂರ್ತಿ ಇಲ್ಲಿನ ಜನರಲ್ಲಿ ಬಣವ್ಯವಸ್ಥೆ ಉಳಿದುಕೊಂಡು ಬಂದಿತ್ತು. ರೋಮನ್ನರ ಕಾಲದಲ್ಲಿ ಇಲ್ಲಿನ ಪರ್ವತಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣವಾಗುವವರೆಗೂ ಇದು ಹೆಚ್ಚಾಗಿ ಪ್ರಗತಿ ಹೊಂದಲಿಲ್ಲ. ದಕ್ಷಿಣದಲ್ಲಿ ಏಳನೆಯ ಶತಮಾನದಿಂದೀಚೆಗೆ ಇಲಿರಿಯನ್ ಜನ ಗ್ರೀಕರ ವಸಾಹತುಗಳೊಂದಿಗೆ ಸಂಪರ್ಕ ಬೆಳಸಿದ್ದರು.

	ಕ್ರಿ. ಪೂ. 4ನೆಯ ಶತಮಾನದಲ್ಲಿ ಇಲಿರಿಯನ್ನರು ಬಾರ್ಡಿಲಿಸ್ ಮತ್ತು ಕ್ರೈಟಸರ ನೇತೃತ್ವದಲ್ಲಿ ಪ್ರಬಲ ರಾಜ್ಯ ಕಟ್ಟಿದರು. ಮ್ಯಾಸಿಡೋನಿಯದ ಅರಸನಾಗಿದ್ದ ಫಿಲಿಪ್ ಸೈನ್ಯಸಜ್ಜಿತನಾಗಿ ತನ್ನ ರಾಜ್ಯದ ಉತ್ತರದಲ್ಲಿದ್ದ ಇಲಿರಿಯಕ್ಕ ನುಗ್ಗಿ ಡಾನ್ಯೂಬ್ ನದಿಯವರೆಗೂ ದಾಳಿ ನಡೆಸಿ ಗ್ರೀಸ್ ಸಂಸ್ಕøತಿಯ ರಕ್ಷಕನೆಂದು ಹೆಸರು ಪಡೆದ. ಈತನ ಮಗ ಅಲೆಕ್ಸಾಂಡರ್ ತನ್ನ ತಂದೆಯ ಪರಾಕ್ರಮದ ಮುಂದೆ ತನಗೇನೂ ಹೆಚ್ಚಾಗಿ ಮಾಡಲುಳಿದಿಲ್ಲವೆಂದು ಮುನಿಸಿಕೊಂಡು ತಾಯಿಯೊಂದಿಗೆ ಇಲಿರಿಯಕ್ಕೆ ಹೋದ. ತಂದೆಯ ಮರಣಾನಂತರ ಮ್ಯಾಸಿಡೋನಿಯದ ಪ್ರಭುವಾಗಿ, ಆಗ ಮತ್ತೆ ತಲೆ ಎತ್ತಿದ್ದ ಇಲಿರಿಯದ ಕ್ರೈಟಸ್‍ನನ್ನು ಹತ್ತಿಕ್ಕಿದ.

	ಕ್ರಿ. ಪೂ. 240ರಿಂದ ಮುಂದೆ ಇಪ್ಪತ್ತೆರಡು ವರ್ಷಕಾಲ ಇಲ್ಲಿ ಶಾಂತಿ ನೆಲೆಸಿತ್ತು. ಮತ್ತೆ ಇಲಿರಿಯನ್ನರು ಪ್ರಬಲವಾದರು. ದೊರೆ ಆಗ್ರನ್ ಮತ್ತು ರಾಣಿ ಟ್ಯೂಟಳ ನೇತೃತ್ವದಲ್ಲಿ ದಕ್ಷಿಣದಲ್ಲಿ ಇನ್ನೊಂದು ರಾಜ್ಯ ಪ್ರಬಲವಾಯಿತು. ಅಲ್ಲಿನ ಕಡಲ್ಗಳ್ಳರ ಪಡೆಗೆ ರಾನಿ ಟ್ಯೂಟಳೇ ಸ್ವಾಮಿನಿ. ಕ್ರಿ. ಪೂ. 228ರಲ್ಲಿ ರೋಮನ್ನರು ಇವಳನ್ನು ಸೋಲಿಸಿ ಕರಾವಳಿಯನ್ನು ವಶಪಡಿಸಿಕೊಂಡರು. ಆಮೇಲೆ ಡಿಮಿಟ್ರಿಯಸ್ ತಲೆಯೆತ್ತಿದ. ಕ್ರಿ. ಪೂ. 219ರಲ್ಲಿ ರೋಮನ್ನರು ಅವನನ್ನೂ ಸೋಲಿಸಿ ಉತ್ತರ ಭಾಗವನ್ನೂ ವಶಪಡಿಸಿಕೊಂಡರು ಅನಂತರದಲ್ಲಿ ಇಲಿರಿಯನ್ ದೊರೆ ಜೆಂತಿಯಸ್, ಮ್ಯಾಸಿಡೋನಿಯದ ಪರ್ಸೂಸ್‍ನೊಂದಿಗೆ ಕೂಡಿಕೊಂಡಾಗ ರೋಮನ್ನರು ಸ್ಕೊಡ್ರಾ ಪ್ರದೇಶದ ಮೇಲೆ ಆಕ್ರಮಣ ನಡೆಸಿದರು. ಅದರ ಆಳ್ವಿಕೆ ನಾರೊ ನದಿಯವರೆಗೂ ವಿಸ್ತರಿಸಿತು (ಕ್ರಿ. ಪೂ. 168). ಇಡೀ ಇಲಿರಿಯನ್ ಬಣಗಳ ಸಂಪೂರ್ಣ ಪರಾಭವವಾಗಿ ಸಾವ ನದಿಯವರೆಗಿನ ಪ್ರದೇಶವೆಲ್ಲ ರೋಮನ್ನರ ವಶವಾದದ್ದು ಆಕ್ಟೇವಿಯನ್ನನ ಕಾಲದಲ್ಲಿ (ಕ್ರಿ. ಪೂ. 35-33). ಮುಂದೆ ಇಲ್ಲಿ ಅನೇಕ ದಂಗೆಗಳಾದವು. ಕೊನಗೆ ರೋಮನ್ನರು ಇಲಿರಿಕಂನಲ್ಲಿ ರಸ್ತೆಗಳನ್ನು ನಿರ್ಮಿಸಿದರು. ಪಟ್ಟಣಗಳು ಮೇಲೆದ್ದವು. ಇಲ್ಲಿ ಜನರು ರೋಮನ್ ಪ್ರಭಾವಕ್ಕೊಳಗಾಗಿ ಅದರ ಪ್ರಜೆಗಳಾದರು. ರೋಮನ್ ಸಾಮ್ರಾಜ್ಯಕ್ಕೆ ದಕ್ಷ ಪಡೆಗಳನ್ನೊದಗಿಸಿದರು. ಕ್ಲಾಡಿಯಸ್, ಆರಿಲಿಯನ್, ಪ್ರೋಟಿಸ್, ಕ್ಯಾರಸ್, ಡೈಯಕ್ಲೀಷಿಯನ್, ಮಾಕ್ಸಿಮಿಯನ್ ಚಕ್ರವರ್ತಿಗಳು ಇಲ್ಲಿನವರು. ಸ್ಲಿಟ್‍ನಲ್ಲಿದ್ದ ಪ್ರಸಿದ್ಧ ಅರಮನೆಯ ನಿರ್ಮಾತೃ ಡೈಯಕ್ಲೀಷಿಯನ್, ರೋಮನ್ ಸಾಮ್ರಾಜ್ಯ ಕ್ಷೀಣದೆಸೆಗೆ ಬಂದಾದ ಇಲಿರಿಯನ್ ಪ್ರಾಂತ್ಯಗಳ ಮೇಲೆ ಅವರ ಹತೋಟಿ ಕಡಿಮೆಯಾಯಿತು. ಇಲಿರಿಯ ರೋಮಿಗೆ ಕಪ್ಪ ಕಾಣಿಕೆ ಸಲ್ಲಿಸುವಷ್ಟಕ್ಕೆ ಮಾತ್ರವೇ ಈ ಸಂಬಂಧ ಉಳಿದುಕೊಂಡಿತು. ಕೊನೆಯಲ್ಲಿ ಇದು ಬಿಜಾಂಟಿನ್ ಸಾಮ್ರಾಜ್ಯಕ್ಕೆ ಸೇರಿಹೋಯಿತು.
(ನೋಡಿ- ಬಿeóÁಟೀಯನ್-ಸಾಮ್ರಾಜ್ಯ) 
(ಸಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ